ರೈತರು ಓದಲೇಬೇಕಾದಂತ ಪುಸ್ತಕ ಒಂದು ಹುಲ್ಲಿನ ಕ್ರಾಂತಿ THE ONE-STRAW REVOLUTION: AN INTRODUCTION TO NATURAL FARMING JAPANESE FAMOUS BOOK
ಈ ಲೇಖವನ್ನು ಕೃಷಿಯ ಬಗ್ಗೆ ಎಂದು ನಿರೀಕ್ಷಿಸಿದವರಿಗೆ ಇದು ಆಹಾರ, ಆರೋಗ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ಕುರಿತಾಗಿರುವ ಗ್ರಂಥವೆಂದು ಕಂಡುಬಂದರೆ ಆಶ್ಚರ್ಯವಿಲ್ಲ. ತಾತ್ವಿಕ ವಿಚಾರಧಾರೆ ಎಂಬ ವದಂತಿ ಕೇಳಿ ಈ ಬ್ಲಾಗ್ ಹುಡುಕುವವರಿಗೆ ಇಲ್ಲಿ ತರಕಾರಿ, ಭತ್ತ, ಕಿತ್ತಳೆ ಬೆಳೆಯ ಕುರಿತ ವಿವರಗಳೂ ಕಂಡುಬಂದಾವು.
ಈ ರೂಢಿಗತ ನಿರೀಕ್ಷೆಯ ಕಾರಣದಿಂದಲೇ ಈ ಲೇಕಾನಿ ಗಮನಾರ್ಹ. ಏಕೆಂದರೆ ನಾವು ಸಾಧಕರನ್ನು ವಿಶೇಷಜ್ಞರೆಂದೂ, ಒಂದು ಪುಸ್ತಕ ಒಂದೇ ವಿಷಯವನ್ನು ಕುರಿತಾಗಿರುತ್ತದೆಂದೂ ನಿರೀಕ್ಷೆಯಲ್ಲಿ ಬೆಳೆದಿದ್ದೇವೆ. 'ಒಂದು ಹುಲ್ಲಿನ ಕ್ರಾಂತಿ* ಏಕಕಾಲಕ್ಕೆ ಪ್ರಾಯೋಗಿಕ ಮಹಿಮೆ ಮತ್ತು ತಾತ್ವಿಕ ವಿಚಾರಧಾರೆಗಳೆರಡನ್ನೂ ಹೆಣೆದುಕೊಂಡಿದೆ. ಕೃಷಿ ಕುರಿತಾದ ಅತ್ಯಾವಶ್ಯಕ ಪುಸ್ತಕ ಇದು, ಏಕೆಂದರೆ ಇದು ಕೇವಲ ಕೃಷಿ ಕುರಿತಾಗಿ ಇಲ್ಲ.
ನಮ್ಮ ನೆಲಕ್ಕೆ ಪುಕುವೊಕಾರ ತಂತ್ರಗಳನ್ನು ನೇರವಾಗಿ ಇಳಿಸುವುದು ಕಷ್ಟಸಾಧ್ಯವೆಂಬುದು ನಮ್ಮ ಪ್ರಾಜ್ಞ ಓದುಗರಿಗೆ ಅರಿವಾದೀತು. ಆದರೆ ನಮ್ಮ ನೆಲ, ಹವೆ, ಬೆಳೆಗಳನ್ನು ಹೊಸ ಕುತೂಹಲ, ಮುಕ್ತ ದೃಷ್ಟಿ ಮತ್ತು ಸರಿಯಾದ ಕಾಳಜಿಯಿಂದ ಅಧ್ಯಯನ ಮಾಡಿದಲ್ಲಿ ಬಹಳಷ್ಟು ಸಾಧಿಸಬಹುದು ಎಂಬುದನ್ನು ಈ ಗ್ರಂಥ ಕಲಿಸಿಕೊಡುತ್ತದೆ. ಧ್ವನಿತಾರ್ಥ ಮತ್ತು ಸ್ಫೂರ್ತಿ ಎರಡನ್ನೂ ನೀಡುವ ಕೃತಿ ಇದು.
ಇದನ್ನು ಓದುವ ರೈತನೊಬ್ಬ ಸತತವಾಗಿ ಈ ಪುಸ್ತಕದಲ್ಲಿಯ ಕೃಷಿಯ ವಿವರಗಳು ತನ್ನ ಹೊಲಗದ್ದೆಗೆ, ಅಲ್ಲಿಂದ ತನ್ನ ಇಡೀ ಕೃಷಿ ಜಗತ್ತಿಗೆ ಹೀಗೆ ಚಿಂತನೆ ಕೊಂಡಿಗಳನ್ನು ಸ್ಥಾಪಿಸಿಕೊಳ್ಳುತ್ತಾ ಹರಡಿ ಬೆಳೆಯುವುದನ್ನು ಗಮನಿಸಬಹುದು.
ಬದುಕಿನ ಒಂದು ಅಂಗವನ್ನು ಇನ್ನೊಂದರಿಂದ ಬೇರೆ ಮಾಡಲಾಗದು ಎಂಬುದನ್ನು ಫುಕುವೊಕಾ ಅರ್ಥಮಾಡಿಕೊಂಡಿದ್ದಾರೆ. ನಾವು ನಮ್ಮ ಧಾನ್ಯ ಬೆಳೆವ ರೀತಿ ಬದಲಾಯಿಸದಾಗ ಆಹಾರ ಬದಲಾಗುತ್ತದೆ, ಸಮಾಜ ಬದಲಾಗುತ್ತದೆ. ನಮ್ಮ ಮೌಲ್ಯಗಳು ಬದಲಾಗುತ್ತವೆ. ಆದ್ದರಿಂದಲೇ ಈ ಪುಸ್ತಕ ಕಾರಕಾರಣ ಸಂಬಂಧ ಕುರಿತಾಗಿದೆ. ನಮ್ಮ ಅರಿವಿಗೆ ನಾವು ಜವಾಬ್ದಾರರಾಗಿರುವುದರ ಕುರಿತಾಗಿದೆ.
ಫುಕುವೊಕಾರ ಬದುಕಿಗೂ, ಸಾವಯವ ಕೃಷಿಯ ಪಿತಾಮಹ ಆಲ್ಬರ್ಟ್ ಹೋವಾರ್ಡ್‌ರ ಬದುಕಿಗೂ ಇರುವ ಸಾಮ್ಯ ಗಮನಿಸಬೇಕು. ಹೋವಾರ್ಡ್‌ರಂತೆ ಫುಕುವೊಕಾ ಕೂಡಾ ಪ್ರಯೋಗ ಶಾಲೆಯ ವಿಜ್ಞಾನಿಯಾಗಿ ಬದುಕು ಆರಂಭಿಸಿದವರು. ಆ ಪ್ರಯೋಗ ಶಾಲೆಯ ಮಿತಿ ಅಷ್ಟೇ ಬೇಗ ಅವರ ಅರಿವಿಗೆ ಬಂತು. ಹೋವಾರ್ಡ್ ಪ್ರಯೋಗ ಶಾಲೆಯಿಂದ ಮಣ್ಣಿಗೆ ಹೊರಳಿಕೊಂಡರು. ಅದರೊಂದಿಗೆ ಅವರ ಜೀವನಶೈಲಿಯೂ ಬದಲಾಯಿತು. ಹೇಳುವ ಮೊದಲು, ಮಾಡುವ ಜವಾಬ್ದಾರಿಯ ಅರಿವೂ ಮೂಡಿಬಂತು.
ಪುಕುವೊಕಾ ಹೇಳುತ್ತಾರೆ, 'ಕೊನೆಗೂ ನಾನು ನನ್ನ ಚಿಂತನೆಗಳಿಗೊಂದು ರೂಪು ಕೊಡಲು ನಿಶ್ಚಯಿಸಿದೆ. ಅವುಗಳನ್ನು ಕ್ರಿಯೆಗಿಳಿಸಲು ತೀರ್ಮಾನಿಸಿದೆ. ತನ್ಮೂಲಕ ನನ್ನ ಅರಿವು ತಪ್ಪೋ ಸರಿಯೋ ಎಂದು ತೀರ್ಮಾನಿಸ ಬಯಸಿದೆ. ಕೃಷಿ ಮಾಡುತ್ತಾ ಬಾಳುವುದು ನನ್ನ ಜೀವನದ ದಾರಿ ಎನಿಸಿತು. ನೂರು ವ್ಯಾಖ್ಯೆಗಳ ಬದಲು ಈ ತತ್ವವನ್ನು ಜೀವಿಸುವುದೆ ಸರಿಯಾದ ದಾರಿಯಲ್ಲವೇ?'
ವಿಶೇಷಜ್ಞನೊಬ್ಬ ತಾನು ಹೇಳಿದ್ದನ್ನು ಮಾಡಹೊರಟಾಗ ಅವನ ಮಿತಿಯ ಗೋಡೆಗಳು ಬಿದ್ದು ಹೋಗುತ್ತವೆ. ಆಗ ಆತನ ಧ್ವನಿಗೊಂದು ವಿಶಿಷ್ಟ ಗಾಂಭೀರ ಬರುತ್ತದೆ. ಆತನ ಮಾತಿನಲ್ಲಿ ಜ್ಞಾನವಷ್ಟೇ ಅಲ್ಲ ಅನುಭವವೂ ಬೆರೆತಿರುತ್ತದೆ.
ಫುಕುವೊಕಾ 'ಏನೂ ಮಾಡದಿರುವ' ಕೃಷಿ ವಿಧಾನಗಳ ಬಗ್ಗೆ ಮಾತಾಡುವಾಗ ಸಂತ ಮ್ಯಾಥನ ಮಾತುಗಳು ನೆನಪಿಗೆ ಬರುತ್ತವೆ. "ಗಾಳಿಯಲ್ಲಿ ತೇಲುವ ಹಕ್ಕಿಗಳ ನೋಡು. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜ ತುಂಬುವುದಿಲ್ಲ, ನಾಕದ ತಂದೆ ಅವುಗಳನ್ನು ಸಲಹುತ್ತಾನೆ" ಈ ಎರಡೂ ಉದಾಹರಣೆಗಳ ಉದ್ದೇಶ ನಮ್ಮನ್ನು ಎಚ್ಚರಿಸುವುದೇ ಆಗಿದೆ; ನಾವು ಈ ಜಗತ್ತನ್ನಾಗಲೀ, ನಮ್ಮನ್ನೇ ಆಗಲಿ ಸೃಷ್ಟಿಸಿಲ್ಲ. ನಾವು ಬದುಕುತ್ತಿರುವುದು ಇಲ್ಲಿನ ಜೀವಸಂಕುಲವನ್ನು ಮುಕ್ಕುತ್ತಾ ಸೃಷ್ಟಿಸುತ್ತಾ ಅಲ್ಲ! ನಿಜ, ಹಕ್ಕಿಗೆ ಹುಡುಕಾಡದೇ ಆಹಾರ ದಕ್ಕದು. ಅಂತೆಯೇ ರೈತನಿಗೂ ದುಡಿಯದೇ ಅನ್ನ ಹುಟ್ಟಿದು. ಈ ವಾಸ್ತವವನ್ನು ತಮ್ಮ ವಿಶಿಷ್ಟ ಹಾಸ್ಯದ ಮೂಲಕ ಫುಕುವೊಕಾ ವಿವರಿಸುತ್ತಾರೆ. "ನಾನು 'ಏನೂ ಮಾಡದಿರುವ' ಕೃಷಿ ಬಗ್ಗೆ ಮಾತನಾಡುತ್ತಿರುವ ಕಾರಣ, ಬಹಳಷ್ಟು, ಮಂದಿ ಕಲ್ಪಿತಲೋಕ ಕೈಗೆಟಕುತ್ತದೆ ಅನ್ನುವ ಕಲ್ಪನೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಹಾಸಿಗೆಯಿಂದ ಏಳದೇ ಉಂಡು ಬದುಕುವ ಕಲ್ಪನೆ ಈ ಮಂದಿಗಿರುವಂತಿದೆ." ಇಲ್ಲಿನ ವಾದ ಇರುವುದು ಕೆಲಸದ ವಿರುದ್ಧವಲ್ಲ, ಅನಗತ್ಯ ದುಡಿಮೆಯ ವಿರುದ್ಧ, ಜನರು ತಾವು ಬಯಸುವುದನ್ನು ಪಡೆಯುವುದಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಶ್ರಮಪಡುತ್ತಾರೆ. ಎಷ್ಟೋ ಸಾರಿ ಅವರು ಆಸೆಪಡುವ ವಸ್ತುಗಳು ಅವರ ಅಗತ್ಯದ್ದೇನೂ ಆಗಿರುವುದಿಲ್ಲ
ವಿಶೇಷಜ್ಞ ಅಧಿಕಾರವಾಣಿಗೆ ಸಾಮಾನ್ಯಜ್ಞನೊಬ್ಬನ ಪ್ರತಿಕ್ರಿಯೆ 'ಏನೂ ಮಾಡದ' ಕೃಷಿ ತತ್ವದ ನಿಲುವೆನ್ನಬಹುದು. ಹೀಗೆ ಮಾಡಬೇಕು ಎನ್ನುವಾಗ ಹೀಗೆ ಮಾಡದಿದ್ದರೇನು ಎಂಬ ಪ್ರತಿಕ್ರಿಯೆ ಇದೆಯಲ್ಲ, ಇದು ಮಕ್ಕಳಲ್ಲೂ ಕಾಣಸಿಗುವ ಸ್ಪೋಪಜ್ಞ ಮಾದರಿ.
ವಿಜ್ಞಾನದ ಬಗ್ಗೆ, ಅದರಲ್ಲೂ ತಥಾಕಥಿತ ವಿಜ್ಞಾನದ ಬಗ್ಗೆ, ಸಂಶಯವಿರಿಸಿ ಕೊಂಡಿರುವ ವಿಜ್ಞಾನಿ ಫುಕುವೊಕಾ. ಇದರರ್ಥ ಪುಕುವೊಕಾ ವ್ಯವಹಾರಿಕಸ್ಥರು ಅಥವಾ ಜ್ಞಾನದ ಬಗ್ಗೆ ತಿರಸ್ಕಾರವುಳ್ಳವರೆಂದಲ್ಲ. ಫುಕುವೊಕಾರ ಸಂಶಯ ಜನ್ಮಸಿರುವುದೇ ಅವರ ಪ್ರಖರ ವಾಸ್ತವಿಕ ಪ್ರಾಯೋಗಿಕತೆ ಮತ್ತು ಆಳವಾದ ಅರಿವಿನಿಂದ. ಆಲ್ಬರ್ಟ್ ಹೋವಾರ್ಡ್‌ರಂತೆ ಫುಕುವೊಕಾ ಕೂಡಾ ವಿಶೇಶಜ್ಞತೆಯ ಮೂಲಕ ಸಮಗ್ರ ಜ್ಞಾನವನ್ನು ಖಂಡತುಂಡಾಗಿಸುವುದನ್ನು ಟೀಕಿಸುತ್ತಾರೆ.
ತಮ್ಮ ಕಾವ್ಯಕ್ಷೇತ್ರದ ದರ್ಶನವನ್ನು ಸಮಗ್ರವಾಗಿ ಹುಡುಕಲೆತ್ನಿಸುವ ಫುಕುವೊಕಾ ತಮ್ಮ ಅನ್ವೇಷಣೆಯ ಪೂರ್ಣತ್ವ ತಮಗೆ ಗೊತ್ತಿರುವ ಮತ್ತು ಗೊತ್ತಿಲ್ಲದಿರುವ ಅಂಶಗಳನ್ನೊಳಗೊಂಡಿದೆ ಎಂಬುದನ್ನು ಮರೆಯುವುದಿಲ್ಲ.
ವಿಸ್ಮಯಭರಿತ ರಹಸ್ಯಗಳ ಬಗ್ಗೆ ಆಧುನಿಕ ವಿಜ್ಞಾನಕ್ಕೆ ಅಸಡ್ಡೆ ಇದೆ. ಜೀವ ಜೀವನದ ವೈಶಾಲ್ಯವನ್ನು ತಾನು ಆರಿತಿರುವ ಅರಿವಿನ ಮಟ್ಟಕ್ಕಿಳಿಸುವ ಹಠ ಆಧುನಿಕ ವಿಜ್ಞಾನಕ್ಕಿದೆ. ಹಾಗೇ ತನಗೆ ಗೊತ್ತಿಲ್ಲದಿರುವದನ್ನು ನಿರ್ಲಕ್ಷಿಸಬಹುದೆಂಬ ಉಡಾಫೆಯೂ ಇದೆ. ಆದ್ದರಿಂದ ಫುಕುವೊಕಾ ಆಧುನಿಕ ವಿಜ್ಞಾನದ ಬಗ್ಗೆ ಭಯ ಮತ್ತು ಶಂಕೆ ವ್ಯಕ್ತಪಡಿಸುವುದು. ಈ ಕಾರಣಗಳಿಗಾಗಿಯೇ 'ವಿಜ್ಞಾನ ತನ್ನ ವೈಜ್ಞಾನಿಕ ಜ್ಞಾನದ ಮೂಲಕ ಅರಿತಿರುವುದು ಮೃತ ಪ್ರಕೃತಿಯನ್ನಷ್ಟೇ; ಆತ್ಮವಿಲ್ಲದ ದೇಹದಲ್ಲಿರುವ ಭೂತವನ್ನಷ್ಟೇ' ಎನ್ನುತ್ತಾರೆ ಫುಕುವೊಕಾ.
ಶತಮಾನದ ಹಿಂದೆ ಕವಿ ವಡ್ಸ್‌ವರ್ತ್ ಇದೇ ರೀತಿಯ ಉದ್ಗಾರವೆತ್ತಿದ್ದ:-
"ನಮ್ಮ ಕಡ್ಡಿಯಾಡಿಸುವ ಬುದ್ದಿ ವಸ್ತುಗಳ ಸುಂದರ ರೂಪವನ್ನು ಕೆಡಿಸುತ್ತದೆ. ಕೊಲ್ಲಲೆಂದೇ ಛೇದಗೊಳಿಸುತ್ತೇವೆ ನಾವು"
ಫುಕುವೊಕಾರ ವಿಜ್ಞಾನಕ್ಕೆ ಪ್ರಕೃತಿಯ ಬಗ್ಗೆ ಪೂಜನೀಯ ಗೌರವವಿದೆ. ಮನುಷ್ಯನ ಹಿಡಿತದಳವಿಗೆ ಬಂದ ಪ್ರಕೃತಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆಂಬ ಅರಿವಿದೆ. ಪೂರ್ಣತ್ವದ ಅರಿವು ಒದಗುವುದು ಆನಂದದಿಂದಲೇ ಹೊರತು ಜ್ಞಾನದಿಂದಲ್ಲ. ಬ್ರೇಕ್ ಹೇಳುವುದು ಇದನ್ನೇ ಎಂದು ಫುಕುವೊಕಾ ಸೂಚಿಸುವಂತಿದೆ.
ತನ್ನೊಟ್ಟಿಗೆ ಹರ್ಷವ ಬಂಧಿಸುವಾತ ಹಾರುವ ಹಕ್ಕಿಯ ಸಾಯಿಸುವಾತ. ಆದರೆ ಹಾರುವ ಹರ್ಷವ ಮುದ್ದಿಸುವಾತ ಶಾಶ್ವತ ಅರುಣೋದಯದಲ್ಲಾತನ ವಾಸ.
ಈ ಭವ್ಯ ಉದಾರತೆ ಫುಕುವೊಕಾರ ಕೃಷಿಯ ಒಳನೋಟಗಳಲ್ಲಿದೆ. ಹರ್ಷಾನಂದನವನ್ನು ಪಡೆಯಲು ಪ್ರಯತ್ನಿಸಿದಾಗಲೇ ಅದನ್ನು ಕಳೆದುಕೊಳ್ಳುತ್ತೇವೆ ಎಂದು ನಾವು ಅರಿತಾಗ ಮಾತ್ರ ಸಹಜ ಕೃಷಿಯ ಸಾರವನ್ನು ತಿಳಿಯುತ್ತೇವೆ ಎನ್ನುತ್ತಾರೆ ಪುಕುವೊಕಾ. ಅಧಿಕ ಉತ್ಪಾದನೆ, ಅಧಿಕ ದಕ್ಷತೆ, ಕೈಗಾರಿಕಾ ಕೃಷಿಯ ಗುರಿಗಳು ಸಹಜ ಕೃಷಿಗೆ ಸವಾಲೆಂಬಂತೆ ಫುಕುವೊಕಾ ಹೇಳುತ್ತಾರೆ. “ಕೃಷಿಯ ಅಂತಿಮ ಗುರಿ ಬೆಳೆ ಬೆಳೆಯುವುದಲ್ಲ. ಬದಲು ಮನುಷ್ಯನ ಬೆಳವಣಿಗೆ" ಕೃಷಿ ಅದಕ್ಕೆ ಒಂದು ಸಾಧನ, ಒಂದು ಮಾರ್ಗ